ಮುಳಿಯ ತಿಮ್ಮಪ್ಪಯ್ಯ
1888-1950. ಕನ್ನಡದ ಹಿರಿಯ ವಿದ್ವಾಂಸರಲ್ಲೊಬ್ಬರು. ಪ್ರಸಿದ್ಧ ಸಂಶೋಧಕರು ಹಾಗೂ ವಿಮರ್ಶಕರು. ಪಂಜೆ ಮಂಗೇಶರಾಯ, ಗೋವಿಂದ ಪೈ. ಎಂ. ಎನ್. ಕಾಮತ್ ಮುಂತಾದ ಪ್ರಸಿದ್ಧ ಸಾಹಿತಿಗಳ ಸಮಕಾಲೀನರು. ಇವರ ಊರು ಮುಳಿಯ. ಈಗ ಬಂಟ್ವಾಳೆ ತಾಲ್ಲೂಕಿನಲ್ಲಿ ವಿಟ್ಲದಿಂದ ಸು. 8 ಕಿ.ಮೀ. ದೂರದ ಆಳಿಕೆ ಗ್ರಾಮಕ್ಕೆ ಸೇರಿದೆ. ತಿಮ್ಮಪ್ಪಯ್ಯನವರು ದಕ್ಷಿಣಕನ್ನಡ ಜಿಲ್ಲೆಯ ಕಡೆಂಗೋಡ್ಲುವಿನಲ್ಲಿ ತಮ್ಮ ಅಜ್ಜನ ಮನೆಯಲ್ಲಿ 3-3-1888ರಲ್ಲಿ ಜನಿಸಿದರು. ಇವರ ತಂದೆ ಕೇಶವಭಟ್ಟ. ತಾಯಿ ಮೂಕಾಂಬಿಕೆ. ಕಡೆಂಗೋಡ್ಲು ಶಂಕರಭಟ್ಟರು ತಿಮ್ಮಪ್ಪಯ್ಯನವರ ಸೋದರಮಾವಂದಿರ ಮಕ್ಕಳು.

	ತಿಮ್ಮಪ್ಪಯ್ಯನವರು ಬಾಲ್ಯದಲ್ಲಿಯೇ ಸ್ಥಳೀಯ ಸಂಸ್ಕøತ ವಿದ್ವಾಂಸರಿಂದ ಸಂಸ್ಕøತಾಧ್ಯಯನ ನಡೆಸಿದರು. ಆದರೆ ನಾಲ್ಕನೆಯ ತರಗತಿಯ ವ್ಯಾಸಂಗ ಮುಗಿದ ಮೇಲೆ ಗೃಹಸ್ಥಿತಿ ಸುಗಮವಾಗಿರಲಿಲ್ಲವಾಗಿ, ಇಂಗ್ಲಿಷ್ ಉಚ್ಚ ಶಿಕ್ಷಣದ ಆಸೆಯನ್ನು ತೊರೆದು ಆಗ ಸಂಸ್ಕøತ ಅಧ್ಯಯನಕ್ಕೆ ಪ್ರಸಿದ್ಧವಾಗಿದ್ದ ತಿರುವಾಂಕೂರಿಗೆ ಹೋಗಿ (1906) ಅಲ್ಲಿ ಮಹಾರಾಜ ಸಂಸ್ಕøತ ಕಾಲೇಜು ಸೇರಿ ವ್ಯಾಸಂಗ ನಡೆಸಿದರು. ಎರಡು ಮೂರು ವರ್ಷಗಳ ಅನಂತರ ಮೈಸೂರಿಗೆ ಬಂದು ಸಂಗೀತ ಕಲಾನಿಧಿ ವಾಸುದೇವಾಚಾರ್ಯರ ಬಳಿ ಕೊಂಚ ಕಾಲ ಸಂಗೀತಾಭ್ಯಾಸ ಮಾಡಿದರು. ಸುಮಾರು 1910ರಲ್ಲಿ ತಮ್ಮ ಸ್ವಂತ ಊರಿಗೆ ತೆರಳಿದರು. 1911 ರಲ್ಲಿ ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇರಿದರು. ಇಲ್ಲಿ ಇವರ ಸಾಹಿತ್ಯ ರಚನೆಗೆ ಹೆಚ್ಚಿನ ಅವಕಾಶ ದೊರೆಯಿತು. ಶ್ರೀರಾಮಾಶ್ವಮೇಧದ ಮುದ್ದಣ ಮನೋರಮೆಯರ ಸಂವಾದದಿಂದ ಆಕರ್ಷಿತರಾಗಿ ಚಂದ್ರಾವಳಿ ವಿಲಾಸಂ ಎಂಬ ಹಳಗನ್ನಡ ಗದ್ಯಕೃತಿಯನ್ನು ರಚಿಸಿದರು (1913). ಶೃಂಗಾರ ಪ್ರಧಾನವಾಗಿರುವಂತೆ ಭಾಸವಾಗುವ ಈ ಕೃತಿಯ ವಸ್ತು ಅನುರೂಪ ದಾಂಪತ್ಯದ ವಿಪರೀತ ಫಲ, ಭಗವಂತನ ಲೀಲಾವಿನೋದ, ಭಗವದ್ಭಕ್ತಿಪಾರಮ್ಯಗಳನ್ನೊಳಗೊಂಡಿದೆ.

	1914ರಲ್ಲಿ ತಿಮ್ಮಪ್ಪಯ್ಯನವರೂ ಪೇಜಾವರ ಭೋಜರಾಯರೂ ಸಾಹಿತ್ಯ, ಸಾಮಾಜಿಕ ವಿಷಯಗಳಿಗೆ ಮೀಸಲಾದ ಕನ್ನಡ ಕೋಗಿಲೆ ಎಂಬ ಮಾಸಪತ್ರಿಕೆಯನ್ನು ಪ್ರಾರಂಭಿಸಿದರು. ಆರ್ಥಿಕ ಒತ್ತಡಗಳಿಂದಾಗಿ ಈ ಪ್ರತಿಕೆ ನಾಲ್ಕೈದು ವರ್ಷಗಳಲ್ಲಿ ನಿಂತುಹೋಯಿತು (1919). ತಿಮ್ಮಪ್ಪಯ್ಯನವರ ಪ್ರಾರಂಭದ ಕೃತಿಗಳಾದ ನಡತೆಯ ನಾಡು (1917), ಬಡಹುಡುಗಿ (1917), ಹಗಲಿರುಳು (1918) ಮುಂತಾದವು ಮೊದಲು ಬೆಳಕು ಕಂಡದ್ದು ಕನ್ನಡ ಕೋಗಿಲೆಯಲ್ಲಿ. ಬಡಹುಡುಗಿ ಕನ್ಯಾವಿಕ್ರಯ ಘಟನೆಯೊಂದನ್ನು ವಸ್ತುವಾಗಿಟ್ಟುಕೊಂಡು ರಚಿಸಿದ ಕವನ. ನಡತೆಯ ನಾಡು ಕರ್ಣನೆ ವಿಷಯಕ ನಾಟಕ. ಹಗಲಿರುಳು ಪ್ರಭೋಧ ಚಂದ್ರೋ ದಯದಿಂದ ಪ್ರಚೋದಿತವಾದ ತಾತ್ತ್ವಿಕ ನಾಟಕ ಕೃತಿ.

	1918ರಲ್ಲಿ ತಿಮ್ಮಪ್ಪಯ್ಯನವರು ಮಂಗಳೂರಿನ ಸೇಂಟ್ ಅಲೋಸಿಯಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ನಿಯುಕ್ತರಾದರು. ಇಲ್ಲಿಗೆ ಇವರ ಸಾಹಿತ್ಯ ಜೀವನದ ಮೊದಲ ಘಟ್ಟ ಮುಗಿದು ಎರಡನೆಯ ಘಟ್ಟ ಪ್ರಾರಂಭವಾಯಿತು.

	ಕನ್ನಡ ಕೋಗಿಲೆ ನಿಂತ ಮೇಲೆ ಇವರ ಕೃತಿಗಳು ಅನ್ಯ ಪತ್ರಿಕೆಗಳಲ್ಲಿ ಪ್ರಕಟವಾಗತೊಡಗಿದವು. ಮೈಸೂರಿನ ಕಾದಂಬರೀ ಸಂಗ್ರಹ ಎಂಬ ಮಾಸಪತ್ರಿಕೆಯಲ್ಲಿ ಇವರ ಪ್ರೇಮಪಾಶ ಎಂಬ ಕಾದಂಬರಿ ಪ್ರಕಟವಾಯಿತು. ಶಂಬರಾಸುರ ವಧೆಯನ್ನು ವಸ್ತುವನ್ನಾಗಿಟ್ಟುಕೊಂಡು ಆಂಡಯ್ಯನ ಕಬ್ಬಿಗರ ಕಾವದ ಮಾರ್ಗದಲ್ಲಿ ಇವರು ರಚಿಸಿದ ಸೊಬಗಿನ ಬಳ್ಳಿ ಎಂಬ ಅಚ್ಚಕನ್ನಡ ಕಾವ್ಯ ಮೊದಲು ಇದೇ ಮಾಸಪತ್ರಿಕೆಯಲ್ಲಿ ಪ್ರಕಟವಾಗಿ (1918) ಅನಂತರ 1930ರಲ್ಲಿ ಮಂಗಳೂರಿನ ಸೇಂಟ್ ಅಲೋಸಿಯಸ್ ಕಾಲೇಜಿನ ಕರ್ನಾಟಕ ಸಂಘದವರಿಂದ ಪರಿಷ್ಕøತ ರೂಪದಲ್ಲಿ ಪ್ರಕಟವಾಯಿತು. 1927ರಲ್ಲಿ ಮಂಗಳೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರು 'ಆಂಡಯ್ಯನೂ ಕನ್ನಡಮೆನಿಪ್ಪನಾಡೂ ಎಂಬ ಲೇಖನವನ್ನು ಸಾದರ ಪಡಿಸಿದರು. ಆಂಡಯ್ಯನ ಕಬ್ಬಿಗರ ಕಾವದಲ್ಲಿ ಹುದುಗಿರಬಹುದಾದ ಐತಿಹಾಸಿಕ ವಿಚಾರಗಳನ್ನು ಮೊದಲು ಕೆದಕಿದವರು ತಿಮ್ಮಪ್ಪಯ್ಯನವರು. ಈ ಲೇಖನದಿಂದ ಇವರ ವಿದ್ವತ್ತು ಮೊದಲಬಾರಿಗೆ ಅಖಿಲ ಕರ್ನಾಟಕದ ವಿದ್ವಾಂಸರ ಗಮನ ಸೆಳೆಯಿತು.

	1931ರಲ್ಲಿ ತಿಮ್ಮಪ್ಪಯ್ಯನವರು ಕಾರವಾರದಲ್ಲಿ ನಡೆದ ಹದಿನೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಯುಕ್ತರಾದರು. ಇವರಿಗೆ ಪಂಪನ ಕಾವ್ಯಗಳಲ್ಲಿ ಹೆಚ್ಚಿನ ಆಸಕ್ತಿ ಉಂಟಾಗಿ ಪಂಪನ ಮೇಲೆ ಗ್ರಂಥ ರಚನೆ ಮಾಡುವ ಕೆಲಸ ಕೈಗೊಂಡರು. ಈ ನಡುವೆ ಲಲಿತ ಸಾಹಿತ್ಯ ರಚನೆಗೂ ಕೈ ಹಾಕಿ ಪಶ್ಚಾತ್ತಾಪ ಎಂಬ ಕಾದಂಬರಿಯನ್ನು ಬರೆದು ಪ್ರಕಟಿಸಿದರು (1934). ನಾಲ್ಕು ದಶಕಗಳ ಹಿಂದಿನ ಹಳ್ಳಿಯ ಸಂಸ್ಕøತಿಯನ್ನು ಈ ಕಾದಂಬರಿ ಚಿತ್ರಿಸುತ್ತದೆ.

	ಬಳ್ಳಾರಿ ಸಾಹಿತ್ಯ ಸಮ್ಮೇಳನ ಕಾಲದಲ್ಲಿ ಇವರ ಮೇರುಕೃತಿ 'ನಾಡೋಜ ಪಂಪ ಪ್ರಕಟವಾಯಿತು (1938). ಇದರ ಜೊತೆಗೆ ಪಂಪನ ಆದಿಪುರಾಣದ ಕನ್ನಡ ಅನುವಾದ ರೂಪವಾದ ಆದಿಪುರಾಣ ಸಂಗ್ರಹವೂ ಪ್ರಕಟವಾಯಿತು. ಅನಂತರ ಪಂಪನ ವಿಕ್ರಮಾರ್ಜುನ ವಿಜಯದ ಗದ್ಯಾನುವಾದ 'ಸಮಸ್ತಭಾರತಸಾರ 1941ರಲ್ಲಿ ಪ್ರಕಟವಾಯಿತು. ಈ ನಡುವೆ ನವನೀತ ರಾಮಾಯಣ ಎಂಬ ಲಲಿತ ರಗಳೆಯ ಕಾವ್ಯದ ಪ್ರಥಮ ಭಾಂಡ ಬೆಳಕಿಗೆ ಬಂತು (1940). ಇದರಲ್ಲಿ ಆರ್ಯ ದ್ರಾವಿಡ ಘರ್ಷಣೆ ಧ್ವನಿತವಾಗುತ್ತದೆ. ಇನ್ನೆರಡು ಭಾಂಡಗಳು ಪ್ರಕಟವಾಗಿಲ್ಲ. ಇವರ ಆದಿಪುರಾಣ ಸಂಗ್ರಹ ಸಮಸ್ತ ಭಾರತಸಾರಗಳ ಮಾರ್ಗದಲ್ಲೇ ರಚಿತವಾದ ಇನ್ನೊಂದು ಕೃತಿ ತ್ರಿಪುರದಹನ (1941). ಇದು ಶಿಶುಮಾಯಣನ ತ್ರಿಪುರದಹನ ಸಾಂಗತ್ಯದ ಗದ್ಯಾನುವಾದ. 1941ರ ಡಿಸೆಂಬರ್ ತಿಂಗಳಲ್ಲಿ ತಿಮ್ಮಪ್ಪಯ್ಯನವರು ಲಕ್ಷ್ಮೇಶ್ವರದಲ್ಲಿ ನಡೆದ ಪಂಪನಸಹಸ್ರ ಸಾಂವತ್ಸರಿಕೋತ್ಸವದ ಅಧ್ಯಕ್ಷರಾಗಿ ನಿಯೋಜಿತರಾದರು. ಈ ಕಾಲದಲ್ಲಿ 'ಕಾವ್ಯ ಸಮಯ ಎಂಬ ಕವಿ ಸಮಯ ವಿಷಯಕವಾದ ಗ್ರಂಥವನ್ನು ರಚಿಸತೊಡಗಿದ್ದರು. ಈ ಕೃತಿ ಸಂಪೂರ್ಣವಾಗಿಲ್ಲ. ಇದೇ ಕಾಲದಲ್ಲಿ ರಾವುತ ರಂಗಪ್ಪ ಎಂಬ ಗೀತನಾಟಕವೊಂದನ್ನು ಬರೆಯತೊಡಗಿದರು. ಇದು ಸಾಹಿತ್ಯದಲ್ಲಿ ಪ್ರಾಚೀನ ನವೀನ ಸಂಪ್ರದಾಯಗಳೊಳಗಿನ ಘರ್ಷಣೆಯನ್ನು ಚಿತ್ರಿಸುವ ಅಪೂರ್ವ ವಿಡಂಬನ ರೂಪಕ. ಈ ಪೂರ್ಣ ಕೃತಿ ನಡೆದು ಬಂದ ದಾರಿಯ ಮೊದಲನೆಯ ಭಾಗದಲ್ಲಿ ಪ್ರಕಟವಾಗಿದೆ (ಇವರ ಅಪೂರ್ಣ ಕೃತಿಗಳಲ್ಲಿ ಸಂಸ್ಕøತಿ ಎಂಬ ಕಿರುಹೊತ್ತಿಗೆಯೂ ಒಂದು).

	ಇವರ ಎರಡನೆಯ ವಿಮರ್ಶಾತ್ಮಕ ಕೃತಿ ಪಾರ್ತಿಸುಬ್ವ (1945). ಈ ಗ್ರಂಥದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕವಿಯಾದ ಪಾರ್ತಿಸುಬ್ಬನ ಚರಿತ್ರೆ. ಅವನ ಕೃತಿಗಳ ವಿವರ, ಅವನ ಕಾವ್ಯಶಕ್ತಿ. ಯಕ್ಷಗಾನದ ಸ್ವರೂಪ ಮುಂತಾದ ವಿಷಯಗಳು ವರ್ಣಿತವಾಗಿವೆ. ಕೌಟಿಲ್ಯನ ಅರ್ಥಶಾಸ್ತ್ರ ಇವರಿಗೆ ಅತಿ ಪ್ರಿಯವಾಗಿದ್ದ ಗ್ರಂಥಗಳಲ್ಲಿ ಒಂದಾಗಿತ್ತು. ಅದನ್ನು ಕುರಿತಾದ ವಿಸ್ತøತ ಗ್ರಂಥವೊಂದನ್ನು ಬರೆಯಬೇಕೆಂದಿದ್ದ ಇವರ ಬಯಕೆ ಪೂರ್ಣವಾಗದೆ ಹೋಯಿತು. ಆದರೆ ಅರ್ಥಶಾಸ್ತ್ರವನ್ನು ಕುರಿತು ಬರೆದ ಕೆಲವು ಲೇಖನಗಳು ಹುಬ್ಬಳ್ಳಿಯ ಕರ್ಮವೀರದಲ್ಲಿ ಪ್ರಕಟವಾದುವು (1945-49). 1948ರಲ್ಲಿ ಇವರ ಕವಿರಾಜ ಮಾರ್ಗ ವಿವೇಕ ಎಂಬ ವಿಮರ್ಶಾತ್ಮಕ ಗ್ರಂಥದ ಮೊದಲ ಭಾಗ ಪ್ರಕಟವಾಯಿತು. (ಅನಂತರ ಸಂಪೂರ್ಣ ಗ್ರಂಥ ಪ್ರಕಟವಾಯಿತು). ಇದೇ ವರ್ಷ ಧಾರವಾಡದ ಕನ್ನಡ ಸಂಶೋಧನ ಸಂಸ್ಥೆಯ ಆಶ್ರಯದಲ್ಲಿ ಪ್ರಾಚೀನ ಕ್ನನಡನಾಡಿನ ವ್ಯಾಪ್ತಿ, ಕನ್ನಡ ದೇಸಿ ಸಾಹಿತ್ಯದ ಸ್ವರೂಪ, ಬಾಜನೆಗಬ್ಬವೂ ಯಕ್ಷಗಾನವೂ ಎಂಬ ಮೂರು ಉಪನ್ಯಾಸಗಳನ್ನು ಕೊಟ್ಟರು. ಈ ಉಪನ್ಯಾಸಗಳು ಕನ್ನಡ ನಾಡೂ ದೇಸಿ ಸಾಹಿತ್ಯವೂ ಎಂಬ ಹೆಸರಿನಿಂದ ಸಂಕಲನ ರೂಪದಲ್ಲಿ ಪ್ರಕಟವಾದುವು (1954). ನೃಪತುಂಗನ ಬಲಗೈ ಬಂಟನಾದ ಬಂಕೆಯನನ್ನು ಕುರಿತು ವೀರ ಬಂಕೆಯ ಎಂಬ ಕಾದಂಬರಿ ಇವರ ಕೊನೆಯ ಕೃತಿ.

	ತಿಮ್ಮಪ್ಪಯ್ಯನವರು ಚಿಕ್ಕಪುಟ್ಟ ಲೇಖನಗಳನ್ನು ಬರೆದುದು ಕಡಿಮೆ. 1950ರಲ್ಲಿ ಕನ್ನಡ ಸಾಹಿತ್ಯ ಮತ್ತು ಇತರ ಉಪನ್ಯಾಸಗಳೆಂಬ ಸಂಕಲನ ಪ್ರಕಟವಾಯಿತು. (1963ರಲ್ಲಿ ಇದರ ಎರಡನೆಯ ಆವೃತ್ತಿ ಪ್ರಕಟವಾಯಿತು. ಇದರ ಮೊದಲ ಆವೃತ್ತಿಯಲ್ಲಿರುವ ಲೇಖನಗಳ ಜೊತೆಗೆ ಬೇರೆ ಕೆಲವಾರು ಲೇಖನಗಳೂ ಇವರು ಮಾಡಿದ್ದ ಕೆಲವು ಗ್ರಂಥ ವಿಮರ್ಶೆಗಳೂ ಸೇರಿವೆ).

	1948ರಲ್ಲಿ ತಿಮ್ಮಪ್ಪಯ್ಯನವರು ಉದ್ಯೋಗದಿಂದ ನಿವೃತ್ತರಾದರು. 16-1-1950ರಲ್ಲಿ ನಿಧನ ಹೊಂದಿದರು.

	ವಿದ್ಯಾರ್ಥಿಯಾಗಿ ಹೈಸ್ಕೂಲು ಕಾಲೇಜು ಮೆಟ್ಟಿಲೇರುವ ಭಾಗ್ಯವಿಲ್ಲದಿದ್ದರೂ ಅನ್ಯಾದೃಶ ಬೋಧನಾ ವೈಖರಿಯಿಂದ ಸಾವಿರಾರು ವಿದ್ಯಾರ್ಥಿಗಳ ಗೌರವಾದರಗಳಿಗೆ ಪಾತ್ರರಾದ ತಿಮ್ಮಪ್ಪಯ್ಯನವರು ಉದ್ಗ್ರಂಥಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕದ ಮನ್ನಣೆಯನ್ನು ಗಳಿಸಿಕೊಂಡರು. ಹಳೆಯ ಸಾಂಪ್ರದಾಯಿಕ ವಿದ್ವಾಂಸರಾದರೂ ಆಧುನಿಕ ಮಾರ್ಗದ ಬಗೆಗೆ ಪೂರ್ಣಗೌರವವಿದ್ದ ಇವರ ಚಿಕಿತ್ಸಕ ಬುದ್ದಿಗೆ ಎಂದೂ ಅವಗುಂಠನ ಬಿದ್ದಿರಲಿಲ್ಲ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ